Shri Ganesha: Siddhi kaantha namostu Te!

lord_ganesha_pic

Shri Ganesha! Namostu Te!

||ಗಣಪತಿ ಸ್ತುತಿ||

ಸಿದ್ಧಿಕಾಂತ ನಮೋಸ್ತುತೆ | ಜಯ ಬುದ್ಧಿಪ್ರೀತ ನಮೋಸ್ತುತೆ ||
ಶುದ್ಧಶಾಂತ ನಮೋಸ್ತುತೆ | ಜಯ ರುದ್ರಜಾತ ನಮೋಸ್ತುತೆ ||ಪ||

ಗಜವದನ ಹೇರಂಭ ಗಣಪತಿ | ಭುಜಗ ಭೂಷಣ ಪುತ್ರನೆ |
ನಿಜಮತಿಯ ಎನಗಿತ್ತು ರಕ್ಷಿಸು | ಭಜಿಸಿ ಬೇಡುವೆ ನಿನ್ನನೆ ||
ಅಜಸುರಾದಿಗಳಿಂದ ವಂದ್ಯನೆ | ಸುಜನರಿಷ್ಟ ಪ್ರದಾತನೆ |
ಭಜನಲೋಲನೆ ಭವ್ಯತೇಜನೆ | ಕುಜನ ದರ್ಪ ವಿನಾಶನೆ ||೧||

ಮೂರು ಲೋಕವ ಚರಿಸಿ ವಿಘ್ನವ | ದೂರ ಮಾಡುತ ಕಾಯ್ವನೆ |
ಸೇರಿದೆನು ಚರಣಾರವಿಂದವ | ತೋರೆನಗೆ ಸದ್ಭಾವನೆ ||
ಘೋರತರ ಸಂಸಾರ ಶರಧಿಯ | ತೀರ ಸೇರಿಸಿ ಕಾಯ್ವನೆ |
ಬಾರಿ ಬಾರಿಗು ನಮಿಸಿ ಬೇಡುವೆ | ಧೀರ ಶ್ರೀ ಗುರು ಗಣಪನೆ ||೨||

ಅಂತವಿಲ್ಲದನಂತ ಮಹಿಮನೆ | ಎಂತು ವರ್ಣಿಪೆ ನಿನ್ನನು |
ಭ್ರಾಂತಳಾದೆನು ಸುಖದ ಆಸೆಗೆ | ಶಾಂತತೆಯ ನಾ ಕಾಣೆನು ||
ಅಂತರಂಗವ ಶುದ್ಧಗೊಳಿಸೊ | ವೇದಾಂತ ವೇದ್ಯನೆ ಬೇಡ್ವೆನು |
ದಂತಿವದನನೆ ದಯದಿ ಮನಸಿನ | ಚಂಚಲವ ಬಿಡಿಸೆಂಬೆನು ||೩||

Keyboard: Sudha  Prasanna    Voice:  Smt. Girija, Mundigesara

Download:         Download PDF file         Download MP3 audio file

Udila Tumbiddu: Shreekrishnaraayara Paadakke….

|| ಉಡಿ ತುಂಬಿದ್ದು ||

ಶ್ರೀಕೃಷ್ಣರಾಯರ ಪಾದಕ್ಕೆ ನಮಿಸಿ | ಲೋಕದೊಡತಿ ಶಾರದಾಂಬೆಯ ಸ್ತುತಿಸಿ |
ಕೊಲ್ಲೂರ ಮೂಕಾಂಬಿಕೆ ಉಡಿಲ ತುಂಬುವ ಪದನ | ಏಕಚಿತ್ತದಲಿ ಪೊಗಳುವಿ ||೧||

ಹರಪಾರ್ವತಿ ಹಸೆಮಣೆ ಮೇಲೊಪ್ಪಿರಲು | ತ್ರಿಭುವನದೊಳಗೆಲ್ಲ ಸತಿಯರು ಬಂದು |
ಊರ್ವಿಯ ಮೇಲೆ ಬೆಳೆದಂಥ ಫಲಗಳ | ಊರ್ವಿಗೆ ತುಂಬಿದರೆ ಉಡಿಲನು ||೨||

ಸಣ್ಣಕ್ಕಿ ಬಿಳಿ ಎಲೆ ಹಣ್ಣಡಿಕೆಗಳು | ಸ್ವರ್ಣಲಗೌರಿಗೆ ಉಡಿಲ ತುಂಬುವರು |
ಹೊಂದ್ವಲೆ ಭಾಗ್ಯವ ಕೊಡು ತಾಯೆ ಎನುತ | ಪ್ರಸನ್ನೆಗೆ ತುಂಬಿದರೆ ಉಡಿಲನು ||೩||

ದೇವೇಂದ್ರನ ಪಟ್ಟದರಸಿ ತಾ ಬಂದು | ದಾಳಿಂಬೆ ದ್ರಾಕ್ಷಿಯ ಫಲಗಳ ತಂದು |
ದಾನವ ಮರ್ದನ ದೇವಿ ಸುಖ ಬಾಳೆನುತ | ಮಹದೇವಿಯರು ತುಂಬಿದರೆ ಉಡಿಲನು ||೪||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Mahalakshmiyalli Vara bEDiddu: Seragoddi Bedikolve….

ಪ್ರಿಯ ಓದುಗರಿಗೆಲ್ಲ
“ದೀಪಾವಳಿಯ ಶುಭಾಶಯಗಳು”.
ಈ ದೀಪಾವಳಿಯು ನಮ್ಮೆಲ್ಲರ ಮನೆ-ಮನ ಗಳಿಂದ ಕತ್ತಲೆಯನ್ನು ಹೊರದೂಡಿ
ಸುಖ-ಸಂತಸ-ಸಮೃದ್ಧಿ ಗಳ ಬೆಳಕನ್ನು ತುಂಬಲೆಂದು ಹಾರೈಸುವ
– ಹವ್ಯಕಾವ್ಯ..

|| ಮಹಾಲಕ್ಷ್ಮಿಯಲ್ಲಿ ವರ ಬೇಡಿದ್ದು ||

ಸೆರಗೊಡ್ಡಿ ಬೇಡಿಕೊಳ್ವೆ | ಮಹಾಲಕ್ಷ್ಮಿ | ವರವ ಕೊಡೆನ್ನ ತಾಯೆ ||ಪ||

ಸುರಿಸು ರತ್ನದ ಮಳೆಯ ಮನೆಯೊಳು | ತುರುಗಗಳು ಆಲಯದೊಳಿರಲಿ |
ಕರಿಯು ತೋಷದಿ ಹಾಸು ಹೊಯ್ಯು | ತ್ತಿರಲಿ ಬಾಗಿಲ ಮುಂದೆ ನಿತ್ಯದಿ ||ಅ.ಪ||

ಧನ ಧಾನ್ಯ ಹೆಚ್ಚಾಗಲಿ | ಉಪ್ಪರಿಗೆಯ | ಮನೆ ಕೋಟೆಗಳನು ಕೊಡೆ |
ದನ ಕರುಗಳು ಯಾರ ರಥಮಯ ಅನುಪಮ ಫಲಧೀಶ ಗರ್ವದಿ |
ಧನ ಕೊಡವ್ವ ನೀ ಹರುಷದಿಂದಲಿ | ಘನ ಸುಖದೊಳಿರುವಂತೆ ಮಾಡೆ ||೧||

ದಾಸ ದಾಸಿಯರ ಕೊಡೆ ಸರ್ವರಿಗೆ ನೀ | ಭೂಷಣಾಂಬರವ ಕೊಡೆ |
ಸೂಸಿ ನೀ ಪ್ರತಿ ಶುಕ್ರವಾರದಿ | ಸುಹಾಸಿನಿಯರನು ಕೂಡಿ ಹರುಷದಿ |
ಘೋಷದಿಂ ಪೂಜಿಸಲು ಸಂತಸ | ವಾಸವಾಗಿರು ನಮ್ಮ ಮನೆಯೊಳು ||೨||

ಮನೊಯೊಳಾಡಲಿ ಮಕ್ಕಳು | ಸಂತತ ನಡು ಮನೆಯೊಳ್ತೂಗಲಿ ತೊಟ್ಟಿಲು |
ದಿನ ದಿನಕೆ ಬಹು ಕಾರ್ಯ ಹೆಚ್ಚಲಿ | ಮನವು ಹರುಷವ ಪಡಲಿ ಬಹು |
ಬ್ರಾಹ್ಮಣರ ಭೋಜನ ನಿತ್ಯ ನಡೆಯಲಿ | ಇನಿತು ಯೋಗವು ಎನಗೆ ಘಟಿಸಲಿ ||೩||

ಧರೆ ಗೋವುಗಳ ಧನವು | ಘಟಿಸಲಮ್ಮ | ಕೆರೆ ಬಾವಿಗಳ ಕಟ್ಟಿಸಿ |
ಮೆರೆವ ಛತ್ರಗಳನ್ನೆ ಇರಿಸಿ | ಹರಿಯ ಮಂದಿರಗಳನ್ನೆ ಕಟ್ಟಿಸಿ |
ನಿರುತ ಮಹೋತ್ಸವ ನಡೆಯುವಂದದಿ | ಪರಮ ಸುಕೃತದೊಳಿರುವಂತೆ ಮಾಡೆ ||೪||

ಯಾತ್ರೆಗಳಿಗೆ ಪೋಗುತ | ದಾನವನು | ಸತ್ಪಾತ್ರದೊಳಗೆ ಕೊಡುತ |
ಸ್ತೋತ್ರದಿಂ ಬ್ರಹ್ಮೇಂದ್ರಗೊಂದಿಸಿ | ಸ್ತೋತ್ರದಿಂ ಕೇಳುತಲೆ ಚಿಂತಿಸಿ |
ಗಾತ್ರವಿಲ್ಲದೆ ಪರಶಿವಾನಂದಾತ್ಮ | ಸುಖಮಯವಾಗುವಂತೆ ||೫||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Hennoppisiddu: Besaravetake Baasuraangiyare….

|| ಹೆಣ್ಣೊಪ್ಪಿಸಿದ್ದು ||

ಬೇಸರವೇತಕೆ | ಬಾಸುರಾಂಗಿಯರೆ |
ತೋಷದಿಂದಲಿ ಇವಳನ್ನು ಸಾಕಿ ಸಲಹುವರು ||ಪ||

ಯೋಚನೆ ಏತಕೆ ನೀತಿಯ ಕಾರ್ಯಕೆ |
ತೋಷದಿಂದಿವಳನ್ನು ಸಾಕಿ ಸಲಹುವರು ||೧||

ವಿದ್ಯಾವಂತನು ಪತಿ ಬುದ್ಧಿಯುಳ್ಳವನು |
ತಿದ್ದಿಕೊಂಡಿವಳನ್ನು ಉದ್ಧರಿಸುವನು ||೨||

ನೀತಿವಂತಳು ಅತ್ತೆ | ಪ್ರೀತಿಸುವಳು ಮತ್ತೆ |
ಜಾತೆಯಂದದಲತಿ ನೀತಿ ಬೋಧನೆ ಗೈದು ||೩||

ಕಾಮಧೇನುವೆ ಕಲ್ಪವೃಕ್ಷದಂದದಲಿ |
ಸೂಸುತಿರಲಿ ಸಿರಿ ಸಂಪತ್ತು ಈ ಗೃಹದಿ ||೪||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Vadhu-Vararige Aarati: Maarana Taatage….

|| ವಧೂ ವರರಿಗೆ ಆರತಿ ||

ಮಾರನ ತಾತಗೆ || ಆರತಿ ಬೆಳಗೆ | ನಾರಿ ಶಿರೋಮಣಿಯೆ ||
ನೀರೆ ಬಾರೆ | ನಾರಿಶಿರೋಮಣಿಯೆ ||ಪ||

ಅರ್ತಿಲಿ  ಬೆಟ್ಟವ  ಎತ್ತಿಹನಂತೆ | ಮತ್ತೆ ಕರಡಿಯ ಮಗಳನು ವರಿಸುವನಂತೆ |
ಹತ್ತವತಾರದಿ ಭಕ್ತರ ಸಲಹುವ | ಸತ್ಯಭಾಮ ಪ್ರಿಯಗೆ || ನೀರೆ||

ಶರಧಿ ಶಯನನಾಗಿ ಇರುತಿಹನಂತೆ | ಶರಧೀಶ ಸುತೆಯನ್ನು ವರಿಸುವನಂತೆ |
ಭರದಿ ಸುರರಿಗೆ ಅಮೃತವ ತಂದೆರೆದಿಹ | ಕರುಣಾನಿಧಿ ಸಿರಿವರಗೆ ||ನೀರೆ||

ಪಂಚ ಪಾಂಡವರಿಗೆ ಪರಮ ಪ್ರಿಯನಂತೆ | ಪಾಂಚಾಲಿಯ ಮನ ಕಾಯ್ದವನಂತೆ |
ಕೊಂಚ ನಿಲ್ಲದೆ ಕೌರವರನು ಕೆಡಹಿದ | ಪಂಚಮುಖನ ಸಖಗೆ ||ನೀರೆ||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Chittu Hoydiddu: Chitta Hoyye Nee….

|| ಚಿಟ್ಟು ಹೊಯ್ದಿದ್ದು ||

ಚಿಟ್ಟ ಹೊಯ್ಯೆ ನೀ ಬಾ ಸೀತೆ | ದಿಟ್ಟ ಸಂಜಾತೆ ||ಪ||

ಉರುರು ಗಣ್ಣಿನ ಬಾಲೆ | ಸುಗುಣೆ ನೀ ಸುಶೀಲೆ |
ಜಗದೋದ್ಧಾರನ ಸುಮ ಜ್ವಾಲೆ | ಮುಗುದೆ ಕೋಮಾಲೆ ||೧||

ಹಸ್ತ ಕಡಗ ಚೂಡ್ಯ | ವಿಸ್ತರಿಸಿಹ ವಾದ್ಯ |
ವಿಸ್ತಾರದಲಿ ಮೆಲ್ಲನೆ | ನಿನ್ನ ಹಸ್ತಗಳನು ನೀಡೆ ||೨||

ಕುಂಕುಮ ಕಸ್ತೂರಿ ಬೊಟ್ಟು | ಎಸೆವ ಮೂಗುತಿ ಇಟ್ಟು |
ಕುಸುಮ ನಾಭನ ಕೈಕಟ್ಟು | ಎಸೆವ ಮಣಿ ಇಟ್ಟು ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Vadhu Pravesha:Banda Mandirake Siriya Tanda….

|| ವಧೂಪ್ರವೇಶ ||

ಬಂದ | ಮಂದಿರಕೆ ಸಿರಿಯ ತಂದ | ಮಂದಿರಕೆ ಸಿರಿಯ ತಂದ ||ಪ||
ನಂದ ಕಂದ ಚಂದ | ದಿಂದ ಬಂದು ನಿಂದ |
ಮಂದಹಾಸದ ಮುದ್ದು ಮೊಗದ ನಂದನೆಯ ಸಹಿತ ಬಂದ ||ಅ.ಪ||

ಅತ್ತ ರುಕುಮ ತನ್ನನುಜೆಯ | ಮತ್ತೆ ಶಿಶುಪಾಲಂಗೀವ ವಾರ್ತೆಯ |
ಚಿತ್ತದ್ವಲ್ಲಭ ಬಾ ಎಂದು ಹರಿಯ | ಮತ್ತೆ ಕರೆಸಿದಾ ಸತಿಯ ||೧||

ಅಂಬಿಕಾ ಪೂಜೆಯ ನೆವದಿ | ಅಂಬುಜಾಕ್ಷಿ ಬಂದ ವೇಳ್ಯದಿ |
ಸಂಭ್ರಮವ ನೋಡಿ ಶೀಘ್ರದಿ | ಬಂಡಿಯೊಳಗೆ ಕೂಡ್ರಿಸಿ ಜವದಿ ||೨||

ಆರು ಅರಿಯದಂತೆ ಸೇರಿ | ಸಾರಸಾಕ್ಷ ಶ್ರೀ ಮುರಾರಿ |
ನಾರಿ ರತುನ ತಂದು ಈ ಪರಿ | ದ್ವಾರದಲ್ಲಿ ನಿಂದ ಶ್ರೀಹರಿ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Soseya Griha Pravesha:Mutta Saalidutaale….

|| ಸೊಸೆಯ ಗೃಹಪ್ರವೇಶ ||

ಮುತ್ತ ಸಾಲಿಡುತಾಲೆ ಶ್ರೀ ಲಕ್ಷುಮಿ | ಬಂದಳೆ ಬಲದ ಹೆಜ್ಜೆ ಇಡುತ |
ಬಂದಳೆ ಬಲದ ಹೆಜ್ಜೆ ಇಡುತ | ಮುತ್ತು ಉಳ್ಳವರ ಮಗಳು ಬರುತಾಳೆ | ನೋಡಿರ್ವೇಳೆಯನು ||೧||

ಹವಳ ಸಾಲಿಡುತಾಲೆ ಶ್ರೀಲಕ್ಷುಮಿ | ಬಂದಳೆ ಬಲದ ಹೆಜ್ಜೆ ಇಡುತ | ಬಂದಳೆ ||
ಹವಳ ಉಳ್ಳವರ ಮಗಳು ಬರುತಾಳೆ | ನೋಡಿರ್ವೇಳೆಯನು ||೨||

ಮುತ್ತು ಉಳ್ಳವರ್ಮಗಳೆ | ಮುತ್ತ ಸುರ್ಯಲೆ ಒಯ್ಯೆ | ಭಿತ್ತುತ್ತ ಬಾರೆ ಬಯಲಲ್ಲಿ |
ಬಯಲಲ್ಲಿ ನಮ್ಮೂರಲ್ಲಿ | ಮುತ್ತು ಮಾಣಿಕವೆ ಬೆಳೆಯಲಿ ||೩||

ಹವಳ ಉಳ್ಳವರ್ಮಗಳೆ | ಹವಳ ಸುರ್ಯಲೆ ಒಯ್ಯೆ | ಹರಡುತ್ತ ಬಾರೆ ಬಯಲಲ್ಲಿ |
ಬಯಲಲ್ಲಿ ನಮ್ಮೂರಲ್ಲಿ | ಹವಳ ಮಾಣಿಕವೆ ಬೆಳೆಯಲಿ ||೪||

ಊರು ತುಂಬಲಿ ನಮ್ಮ | ಕೇರಿ ಕೋರೈಸಲಿ | ಊರಿದ ತೋರಣವೆ ಚಿಗುರಲಿ |
ಚುಗುರಲಿ ನಮ್ಮನೆಯ | ಸೊಸೆ ಬಂದು ಮನೆಯ ತುಂಬುವಾಗ ||೫||

ಕೇರಿ ತುಂಬಲಿ ನಮ್ಮ | ಕೊಟ್ಟಿಗೆಯು ತುಂಬಿರಲಿ | ನೆಟ್ಟ ತೋರಣವೆ ಚಿಗುರಲಿ |
ಚಿಗುರಲಿ ನಮ್ಮನೆಯ | ಸೊಸೆ ಬಂದು ಮನೆಯ ತುಂಬುವಾಗ ||೬||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file