Shri Ganesha: Siddhi kaantha namostu Te!

lord_ganesha_pic

Shri Ganesha! Namostu Te!

||ಗಣಪತಿ ಸ್ತುತಿ||

ಸಿದ್ಧಿಕಾಂತ ನಮೋಸ್ತುತೆ | ಜಯ ಬುದ್ಧಿಪ್ರೀತ ನಮೋಸ್ತುತೆ ||
ಶುದ್ಧಶಾಂತ ನಮೋಸ್ತುತೆ | ಜಯ ರುದ್ರಜಾತ ನಮೋಸ್ತುತೆ ||ಪ||

ಗಜವದನ ಹೇರಂಭ ಗಣಪತಿ | ಭುಜಗ ಭೂಷಣ ಪುತ್ರನೆ |
ನಿಜಮತಿಯ ಎನಗಿತ್ತು ರಕ್ಷಿಸು | ಭಜಿಸಿ ಬೇಡುವೆ ನಿನ್ನನೆ ||
ಅಜಸುರಾದಿಗಳಿಂದ ವಂದ್ಯನೆ | ಸುಜನರಿಷ್ಟ ಪ್ರದಾತನೆ |
ಭಜನಲೋಲನೆ ಭವ್ಯತೇಜನೆ | ಕುಜನ ದರ್ಪ ವಿನಾಶನೆ ||೧||

ಮೂರು ಲೋಕವ ಚರಿಸಿ ವಿಘ್ನವ | ದೂರ ಮಾಡುತ ಕಾಯ್ವನೆ |
ಸೇರಿದೆನು ಚರಣಾರವಿಂದವ | ತೋರೆನಗೆ ಸದ್ಭಾವನೆ ||
ಘೋರತರ ಸಂಸಾರ ಶರಧಿಯ | ತೀರ ಸೇರಿಸಿ ಕಾಯ್ವನೆ |
ಬಾರಿ ಬಾರಿಗು ನಮಿಸಿ ಬೇಡುವೆ | ಧೀರ ಶ್ರೀ ಗುರು ಗಣಪನೆ ||೨||

ಅಂತವಿಲ್ಲದನಂತ ಮಹಿಮನೆ | ಎಂತು ವರ್ಣಿಪೆ ನಿನ್ನನು |
ಭ್ರಾಂತಳಾದೆನು ಸುಖದ ಆಸೆಗೆ | ಶಾಂತತೆಯ ನಾ ಕಾಣೆನು ||
ಅಂತರಂಗವ ಶುದ್ಧಗೊಳಿಸೊ | ವೇದಾಂತ ವೇದ್ಯನೆ ಬೇಡ್ವೆನು |
ದಂತಿವದನನೆ ದಯದಿ ಮನಸಿನ | ಚಂಚಲವ ಬಿಡಿಸೆಂಬೆನು ||೩||

Keyboard: Sudha  Prasanna    Voice:  Smt. Girija, Mundigesara

Download:         Download PDF file         Download MP3 audio file

Lakshmi Pooje : Bandale Mahaa Lakshmi….

|| ಲಕ್ಷ್ಮಿ ಬಂದಿದ್ದು ||

ಬಂದಳು ಮಹಾಲಕ್ಷ್ಮಿ | ನಮ್ಮಯ ಮನೆಗೆ | ಸಂಜೆಯ ಹೊತ್ತಿನಲಿ ||
ಬಂದಳು ನಮ್ಮ ಮನೆಗೆ | ನಿಂದಳು ಗೃಹದಲ್ಲಿ |
ನಂದ ಕಂದನ ರಾಣಿ | ವೃಂದಾವನದಿಂದ ||ಪ||

ಹೆಜ್ಜೆ ಮೇಲೊಂದು ಹೆಜ್ಜೆ | ಇಕ್ಕುತ ಕಾಲ ಝಣಿರೆಂಬ ನಾದದಲಿ ||
ಸಜ್ಜನ ಭಕ್ತರಿಗೆ | ಸಾಯುಜ್ಯ ಕೊಡಲಿಕ್ಕೆ |
ಮೂರ್ಜಗದೊಡೆಯನ | ಮುದ್ದು ಮೋಹದ ರಾಣಿ ||೧||

ಶ್ರಾವಣ ಮಾಸ ಸಂಪತ್ ಶುಕ್ರವಾರ | ಪೂರ್ಣಿಮ ದಿವಸದೊಳು ||
ಭೂಸುರರೆಲ್ಲ ಕೂಡಿ | ಸಾಸಿರ ನಾಮ ಪಾಡೆ |
ವಿಶ್ವ ವಂದಿತೆ ನಮ್ಮ | ವಾಸುದೇವನ ರಾಣಿ ||೨||

ಕನಕಾಭರಣ ಭೂಷಿತೆ | ಮಹಾಲಕ್ಷ್ಮಿ | ಕನಕಾಂಬರ ಶೋಭಿತೆ ||
ಕನಕ ಕುಂಡಲ | ಕಿರೀಟಧಾರಿಣಿ ದೇವಿ |
ಕರುಣವ ಬೀರುತ್ತ | ಭರದಿ ತಾ ಬಂದಳು ||೩||

ಕಮಲ ನಯನೆ ಬಂದಳು | ನಮ್ಮ ಮನೆಗೆ | ಕನಕಾಭರಣವಿಟ್ಟು ||
ತರ ತರ ಪೀತಾಂಬರ | ಶೋಭಿತವಾದ |
ಕಮಲಾಸನದೊಳು | ಕಮಲೇಶನ ರಾಣಿ ||೪||

ಹೇಮಾಭರಣ ಭೂಷಿತೆ | ಮಹಾಲಕ್ಷ್ಮಿ | ಕ್ಷೀರಾಂಬುಧಿ ವಾಸಿತೆ ||
ನಾರಾಯಣ ಪ್ರೀತೆ | ಧಾರುಣಿ ಪೋಷಿತೆ |
ದಾರಿದ್ರ್ಯಹಾರಿಣಿ | ದೀನೋದ್ಧಾರಿಣಿ ||೫||

ಕನಕವಾಯಿತು ಮಂದಿರ | ದೇವಿಯು ಬರಲು | ಜಯ ಜಯ ಜಯವೆನ್ನಲು ||
ನಿರುತದಿ ಯೋಗಿಗಳ | ಸೇವ್ಯಮಾನಿತಳಾಗಿ |
ಕನಕಮಲ್ಲಿಗೆ ತನ್ನ | ಕಾಂತನ ಒಡಗೊಂಡು ||೬||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Lakshmi Pooje : Baare Nammane Olage….

|| ಲಕ್ಷ್ಮಿ ಪೂಜೆ ||

ಬಾರೆ ನಮ್ಮನೆ ಒಳಗೆ | ಭಾಗ್ಯದ ದೇವಿ ||ಪ||

ಬಾರೆ ನಮ್ಮನೆ ಒಳಗೆ | ಬಹಳ ಕರುಣದಿಂದ |
ಜೋಡಿಸಿ ಕರಗಳ ಮುಗಿವೆನಾ ಚರಣಕೆ ||ಅ.ಪ||

ಜರಿಯ ಪೀತಾಂಬರ | ನೆರಿಗೆಗಳ ನೀಯುತ |
ಸುರಗಿ ಸಂಪಿಗೆ ಚಂದ್ರ | ಹಾರಗಳೊಪ್ಪುವ ||೧||

ಮಂದಗಮನೆ ನಿನಗೆ | ವಂದಿಸಿ ಬೇಡುವೆ |
ಇಂದಿರೇಶನ ಕೂಡ ಇಂದು | ನಮ್ಮ ಮನೆಯೊಳಗೆ ||೨||

ಹರಡಿ ಕಂಕಣದುಂಡು | ಕರದಲ್ಲಿ ಹೊಳೆಯುವ |
ತರಳೆ ಎನ್ನ ಮೇಲೆ | ಕರುಣವಿಟ್ಟು ಬೇಗ ||೩||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Shiva Stuti: Paalisayyaa Paarvateeshvaraa….

 || ಶಿವ ಸ್ತುತಿ ||

ಪಾಲಿಸಯ್ಯಾ ಪಾರ್ವತೀಶ್ವರಾ || ನೀ ಎನ್ನೊಳೊಲಿದು ||ಪ||
ಪಾಲಿಸಯ್ಯ ಪಾರ್ವತೀಶ | ಲೋಲ ನೇತ್ರ ಭಕ್ತ ಪೋಷ |
ನೀಲಕಂಠ ಪಾರಮೇಶ | ಶೂಲ ಧಾರಿ ತ್ರಿಪುರಹರನೆ ||ಅ.ಪ||

ಓಂಕಾರ ಸ್ವರೂಪ ಈಶ್ವರ | ಶೋಕಾದಿ ಭಕ್ತ | ಕಿಂಕರ ದುಷ್ಟರ ನಾಶನೆ |
ಶಂಕರ ಎಂದೆನಿಸಿಕೊಂಡೆ  | ಕಿಂಕರರೊಳು ಪೂಜೆಗೊಂಡೆ |
ಶಂಕರಿಯ ಪ್ರಾಣಕಾಂತ | ಶಾಂತಕಾ ಶ್ರೀ ರಾಮನಾಥ ||೧||

ಶಿವ ಶಿವ ಶ್ರೀ ರಾಮನಾಥನೆ | ತ್ರಿಶೂಲಧಾರಿ | ಭವಹರ ಭವಾನಿ ಕಾಂತನೆ |
ದೇವ ದೇವ ಎನಿಸಿ ಜಗದೊಳು | ಭವ ಭಯವ ಪರಿಹರಿಸೊ |
ಕೈವಲ್ಯಾತ್ಮಾನಂದ ನಿನ್ನ | ಮೇಲೆ ಮನಸ ನೆಲೆಸೊ ದೇವ ||೨||

ಮಹಾನುಭಾವ ಮದನ ಸುಂದರ | ಮಹಾದೇವ | ಮಾಬಲೇಶ ಮಧುಕರೇಶ್ವರ |
ಮಹಿಯೊಳಿರುವ ಭಕ್ತರನ್ನು | ಮೋಹವಿತ್ತು ಕಾಯೊ ಎನ್ನ |
ಮೇಲೆ ಮೋಹವನ್ನು ನೀನು | ಸರ್ವಕಾಲದಲ್ಲಿ ನಡೆಸು ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Shiva Stuti :Aaratiya Maduvevu Maarahara….

|| ಶಿವನಿಗೆ ಆರತಿ ||

ಆರತಿಯ ಮಾಡುವೆವು ಮಾರಹರ ನಿನಗೀಗ ||ಪ||
ಸೇರುತೆಲ್ಲರೂ ಬಂದು ಭೂರಿ ತೋಷದೊಳು ||ಅ.ಪ||

ಶಂಕರಿಯ ಪ್ರಿಯ ಭಜಕ | ಸಂಕಟವ ಹರಿಸೆನುತ |
ಶಂಖ ಜಾಗಟೆ ಗೈವ | ಓಂಕಾರ ನಾದ ||೧||

ಕಪ್ಪುಗೊರಳನೆ ಪತ್ರೆ | ಪುಷ್ಪಗಳ ಅರ್ಪಿಸುತಾ|
ತಪ್ಪದೆ ಗೈಯುವೆವು | ಕರ್ಪೂರಾರತಿಯಾ ||೨||

ಕಂದುಗೊರಳನೆ ಮುಂದೆ | ತಂದಿಟ್ಟ ನೈವೇದ್ಯ |
ಬಂದು ಸ್ವೀಕರಿಸೆಂದು | ವಂದಿಸುವೆ ಜೀಯಾ ||೩||

ಪಾಪಹರ ಪರಮೇಶ | ರೂಪ ರವಿಯ ಪ್ರಕಾಶ |
ಪಾಪ ಹರಿಸಲು ತೋರ್ವೆವು | ಧೂಪ ದೀಪಗಳಾ ||೪||

ಮಲ್ಲಿಗೆಯ ಸುಮಗಳನು | ಚೆಲ್ಲುವೆವು ಮುಡಿಯಲ್ಲಿ |
ಉಲ್ಲಾಸದಿಂದ ಪೊರೆ | ಚೆಲ್ವ ರಾಮೇಶಾ ||೫||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Vishnu Bhajane: Saari Beduve Maadhavaa….

 || ವಿಷ್ಣು ಭಜನೆ ||

ಸಾರಿ ಬೇಡುವೆ ಮಾಧವಾ | ತೋರೊ ನಿನ್ನಯ ಪಾದವಾ ||ಪ||
ಬಾರಿ ಬಾರಿಗೂ ಭಜಿಸುವೆ | ಬಾರೋ ಒಲಿದು ಮುರಾರಿಯೆ ||ಅ.ಪ||

ಬಳಲುತಿರುವೆನು ಭವದೊಳು | ನೀಡೊ ದರುಷನ ಇಳೆಯೊಳು |
ನೀಲ ಮೇಘ ಶ್ಯಾಮನೆ | ಬಾರೊ ಒಲಿದು ಮುರಾರಿಯೆ ||೧||

ತಂಗಿ ದ್ರೌಪದಿ ನಿನ್ನೊಳು | ಅಣ್ಣ ನೀ ಪೊರೆ ಎನ್ನಲು |
ಬಂದು ಮಾನವ ಕಾಯ್ದೆಯೊ | ಅಂದು ಸಭೆಯೊಳು ಶ್ರೀಹರಿ ||೨||

ಸುಂದರಾಂಗನೆ ನಿನ್ನಯ | ಸುಂದರಾಕೃತಿ ತೋರೆಯಾ |
ಆನಂದದಾಯಕ ಭಾಗ್ಯವಾ | ನಮಗೆ ಕರುಣಿಸೊ ಶ್ರೀಹರಿ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Shiva Pooje :Baare Noduvaa….

 || ಶಿವ ಪೂಜೆ ||

ಬಾರೆ ನೋಡುವಾ | ಪರಶಿವನ ಪೂಜೆಯಾ ||ಪ||

ವಿದ್ಯಾವಂತ ಜನರು | ಶುದ್ಧ ಮಂತ್ರದೊಳು |
ಶ್ರದ್ಧೆಯಿಂದ ಮಾಳ್ಪ | ರುದ್ರಗಭಿಷೇಕವನು ||೧||

ಅಂದವಾದ ಗಂಧ | ಚಂದನಗಳಿಂದ |
ಇಂದುಧರಗೆ ಮಾಳ್ಪ | ಚಂದದಾ ಪೂಜೆಯನು ||೨||

ಮಲ್ಲಿಗೆ ಪುಷ್ಪಗಳು | ಚೆಲ್ವ ಸಂಪಿಗೆಯು |
ಬಿಲ್ವಪತ್ರೆಗಳನು | ಚಲ್ವಗೇರಿಸುವುದಾ ||೩||

ನೇಮದಿಂದ ಜನರು | ಸೋಮವಾರದೊಳು |
ಪ್ರೇಮದಿಂದ ಸಹಸ್ರ | ನಾಮ ಪೂಜೆಗಳನು ||೪||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Ganapati Bhajane: Eraguvenaa Beduvenaa….

|| ಗಣಪತಿ ಭಜನೆ ||

ಎರಗುವೆನಾ ಬೇಡುವೆನಾ | ನೀಡು ನೀ ಪುಷ್ಪವ ಗಜವದನ ||ಪ||

ಭಕ್ತರ ಹೃದಯದಿ ನೆಲೆಸಿಹನೆ | ಮನದಾಭೀಷ್ಟವ ಸಲಿಸುವನೆ |
ದೀನಳಾಗಿ ನಾ ಬೇಡುವೆ ನಿನ್ನೊಳು | ಕುಂಕುಮ ಭಾಗ್ಯವ ನೀಡೆನಗೆ ||೧||

ಗೋಕರ್ಣದೊಳು ನೆಲೆಸಿಹನೆ | ಘೋರ ಪಾಪ ಪರಿಹರಿಸುವನೆ |
ಪರಿ ಪರಿ ಕಷ್ಟವ ನೀ ಪರಿಹರಿಸಿ | ಪತ್ರೆ ಪುಷ್ಪವಾ ನೀಡೆನಗೆ ||೨||

ಮಂಗಲ ನಿತ್ಯ ನಿರಂಜನನೆ | ಮಂಗಲಕರ ಲಂಬೋದರನೆ |
ಮಂಗಲ ಗೌರಿಯ ಪ್ರೇಮದ ಸುತನೆ | ಮಂಗಲವನು ನೀ ನೀಡೆನಗೆ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file