Devi Pooje:Poojisuvenu Taaye….

|| ದೇವಿ ಪೂಜೆ ||
ಪೂಜಿಸುವೆನು ತಾಯೆ | ಬಹು ಭಕ್ತಿಯಿಂದಲಿ | ತೇಜೋಮಯಳೆ ಕಾಯೆ ||
ಪೂಜಿಸುವೆನಾ ನಿನ್ನ ದೇವಿ | ತ್ಯಜಿಸಿ ಸಕಲ ಸುಖ ದುಃಖಗಳನು |
ನಿಜ ಸುಖವ ನಾ ಬಯಸಿ ಸರಸ್ವತಿ | ಹೇ ಜಗನ್ಮಾತಾ ಅತಿ ಪ್ರೇಮದಿ ||೧||

ಮಿಂದು ಮಡಿಯನುಟ್ಟು | ಶುದ್ಧ ಮನದಿ | ತಂದು ಕುಂಭದಿ ಜಲವ |
ಒಂದುಗೂಡಿಸಿ ಕ್ಷೀರದಧಿ ಘೃತ | ಇಂದಿರೆ ಮಧು ಸಕ್ಕರೆಗಳ |
ಚಂದದಿಂದಭಿಷೇಕ ಮಾಡಿ | ವಂದನೆಯ ಮಾಡುತಲಿ ದೇವಿ ||೨||

ಕಂದಳಾಗಿಹೆ ನಾನು | ಕಾತ್ಯಾಯಿನಿ ಚಂದ್ರಮೌಳಿಯ ರಾಣಿ |
ಗಂಧ ಅಕ್ಷತೆಗಳನು ಮತ್ತಾ | ಚಂದನವು ಅರಿಸಿನವು ಕುಂಕುಮ |
ಚಂದ್ರಮುಖಿಯೆ ಹಚ್ಚಿ ನಿನಗಾ | ನಂದವನು ಪಡೆಯುತಲಿ ನಾನು ||೩||

ಪಟ್ಟೆ ಪೀತಾಂಬರವ | ಉಡಿಸಿ ನಿನಗೆ ಇಟ್ಟು ಶಿರದಿ ಕಿರೀಟ |
ಕಟ್ಟಿ ಒಡ್ಯಾಣವನು ಸೊಂಟಕೆ | ಇಷ್ಟ ಮನದಿಂ ಕೈಗೆ ಕಂಠಕೆ |
ಪಟ್ಟಿ ಮೊದಲಾದಾಭರಣಗಳ | ಶ್ರೇಷ್ಠಳೆ ಅಲಂಕರಿಸುವೆವು ||೪||

ಪಾರಿಜಾತ ಚಂಪಕ | ಗುಲಾಬಿಯು | ಕರವೀರ ಸೇವಂತಿಗೆ |
ಮುರುಗ ಮಲ್ಲಿಗೆ ಜಾಜಿ ತಾವರೆ | ಪರಿಮಳದ ಕೇದಿಗೆಯು ಸಂಪಿಗೆ |
ಪರಿಪರಿಯ ಪುಷ್ಪಗಳ ಅರ್ಪಿಸಿ | ಭಾರತಿಯೆ ನಾ ಕರವ ಮುಗಿದು ||೫||

ಹೋಳಿಗೆ ವಡೆಗಳನು | ಕರಜಿಕಾಯಿ ಜಿಲೇಬಿ ಬೂಂಧ್ಯಗಳ |
ಕಲಸಿದನ್ನ ಕ್ಷೀರಾನ್ನಗಳನು | ಶಾಲ್ಯ ಅನ್ನ ದಧ್ಯಾನ್ನಗಳನು |
ಲಲಿತೆ ಶಾವಿಗೆ ಕ್ಷೀರ | ಪಾಯಸಗಳನು ನೈವೇದ್ಯವನು ಮಾಡಿ ||೬||

ಮಾಡುವೆ ಜಲಜಾಕ್ಷಿ | ಪಂಚಾರತಿ | ನೋಡುವೆ ನಿನ್ನ ರೂಪ |
ಪಾಡುವೆನು ನಿನ್ನನ್ನು ವರ್ಣಿಸಿ | ಜೋಡಿಸಿ ಕರಗಳನು ವಿನಯದಿ |
ಸಡಗರದಿ ನಮಸ್ಕರಿಸಿ ಶಾರದೆ | ಬೇಡುವೆನು ಪ್ರತಿದಿವಸ ಸೇವೆಯ ||೭||

ಅಮಿತಪರಾಧಗಳ | ವಿರೂಪಾಕ್ಷ ಭಕ್ತಳ | ಕ್ಷಮಿಸು ನೀ ಭವಾನಿಯೆ |
ಉಮೆಯೆ ಪಾರ್ವತಿ ಕಮಲೆ ಚಂಡಿಕೆ | ಹೇಮವತಿ ಕಾತ್ಯಾಯಿನೀ ವರ |
ವಾಮದೇವನ ಪ್ರೇಮ ಸತಿಯೆ | ಕಾಮಿತಾರ್ಥವ ನೀಡಿ ಸಲಹು ||೮||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a comment