Monthly Archives: March 2014

Ganapati Pooje: Mangalaakshate Tanni…..

|| ಗಣಪತಿ ಪೂಜೆ ||

ಮಂಗಲಾಕ್ಷತೆ ತನ್ನಿ | ಗಿಂಡಿಯಲುದಕವ ತನ್ನಿ | ತೆಂಗಿನಕಾಯ ತೆಗ ತನ್ನಿ |
ತೆಗತನ್ನಿರೆನುತಾಲೆ | ಬ್ರಾಹ್ಮಣರು ನಗುತಾ ನುಡಿದಾರೆ ||ಪ||

ಹೂವು ಅಕ್ಷತೆ ತನ್ನಿ | ಹೂಜಿಯಲುದುಕವ ತನ್ನಿ | ಬಾಳೆಯ ಹಣ್ಣ ತೆಗ ತನ್ನಿ |
ತೆಗತನ್ನಿರೆನುತಾಲೆ | ಗಣಪತಿಯ ಪೂಜೆ ತೊಡಗಿದ ||ಅ.ಪ||

ಉದ್ದಿನ ಬೇಳೆ ಮೇಲೆ | ಇದ್ದವೆ ಮೂರಕ್ಷರ | ಮುದ್ರೆಯುಂಗುರವೇ ಹೊಳೆಯುತ್ತ |
ಹೊಳೆಯುತ್ತ ಅಣ್ಣಯ್ಯ | ಗಣಪತಿಯ ಪೂಜೆ ತೊಡಗಿದ ||೧||

ಹೆಸರಿನ ಬೇಳೆಯ ಮೇಲೆ | ಎಸೆದವೆ ಮೂರಕ್ಷರ | ಹರಳಿನುಂಗುರವೇ ಹೊಳೆಯುತ್ತ |
ಹೊಳೆಯುತ್ತ ಅಪ್ಪಯ್ಯ | ಗಣಪತಿಯ ಪೂಜೆ ತೊಡಗಿದ ||೨||

ಪಟ್ಟೆ ಹೊಚ್ಚಡನೊದ್ದು | ಮುತ್ತಿನ ಬಾಶಿಗ ಮುಡಿದು | ಮಿತ್ರೆಯನು ತನ್ನ ಬಲದಲ್ಲಿ |
ಬಲದಲಿ ಕೂರಿಸಿಕೊಂಡು | ಗಣಪತಿಯ ಪೂಜೆ ತೊಡಗಿದ ||೩||

ಹಾಲಿನೂಚ್ಚಡ ಹೊದ್ದು| ನೀಲದುಂಗುರವಿಟ್ಟು| ನಾರಿಯನು ತನ್ನ ಬಲದಲ್ಲಿ |
ಬಲದಲಿ ಕೂರಿಸಿಕೊಂಡು | ಗಣಪತಿಯ ಪೂಜೆ ತೊಡಗಿದ ||೪||

ಗಣಪತಿಯ ಪೂಜಿಸಿದ | ಗಣಪತಿಯ ಅರ್ಚಿಸಿದ | ಗಣಪತಿಗೆ ಕಾಯ ಒಡೆಸಿದ |
ಒಡೆಸಿದ ತಮ್ಮಯ್ಯ | ಗಣಪತಿಗೆ ಕೈಯಾ ಮುಗಿದನೆ ||೫||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Ganapati Bhajane:Deva Devottamane….

 

ಪ್ರಿಯರೆ,
ಸರ್ವರಿಗೂ ಯುಗಾದಿಯ ಶುಭಾಶಯಗಳು. ನೋಡು ನೋಡುತ್ತ ನಮ್ಮ ಈ ಬ್ಲಾಗ್ ಸಹ ಒಂದು ವರ್ಷದ್ದಾಯಿತು.
ನಮ್ಮ ಸಂಬಂಧ ಹೀಗೆಯೇ ಮುಂದುವರಿಯಲೆಂದು ಹಾರೈಸುವ
– ಹವ್ಯಕಾವ್ಯ.
—————–

|| ಗಣಪತಿ ಪರ ||

ದೇವ ದೇವೋತ್ತಮನೆ | ದೇವ ಗಣರಾಜಾ |
ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ನೀನೆ ||ಪ||

ಆದಿ ಪೂಜಿತ ನೀನೆ | ಆದಿ ವಂದಿತ ನೀನೆ |
ಮೇಧಿನಿ ಒಡೆಯ ನೀನೆಂದು ಮೆರೆವವನೆ |
ಮೋದಕ ಪ್ರಿಯ ನೀನೆ | ಸಾಧು ಜನ ಪೋಷಕನೆ |
ಆದರದಿ ನಾ ನಿನ್ನ | ಪಾದಾಂಬುಜವ ಬಿಡೆನು ||೧||

ಗಜಮುಖನೆ ಶೋಭಿಪನೆ | ಉರಗಭೂಷಣ ನೀನೆ |
ಅಜಸುರಾಸುರವಂದ್ಯ ತ್ರಿಜಗ ಪಾಲಕ ನೀನೆ |
ರಜತಾದ್ರಿವಾಸ ಶ್ರೀ | ಪರಮೇಶ್ವರನ ಸುತನೆ |
ಅಜಕ ಜನಮನ ಪ್ರಿಯನೆ | ಭಜಿಸಿ ಕೊಂಡಾಡುವೆನು ||೨||

ಜನನ ಮರಣಾಂತಕನೆ | ಜನನಿ ಗೌರೀ ಸುತನೆ |
ಮನುಜ ಜನ್ಮವ ಎನಗೆ ನೀಡಿದವ ನೀನೆ |
ಜನುಮ ಜನುಮಾಂತರದ | ಭವ ರೋಗ ಕಳೆಯಯ್ಯ |
ನಿನ್ನ ಆರಾಧಿಸುವ | ಸನ್ಮಾರ್ಗ ತೋರಯ್ಯ ||೩||

ಸಿದ್ಧಿ ಬುದ್ಧಿಯರರಸ | ವಿದ್ಯಾದಾಯಕ ನೀನೆ |
ಉದ್ಧರಿಸಿ ಸಕಲರನು ತಿದ್ದಿ ಪೊರೆವವ ನೀನೆ |
ವಿದ್ಯಾಧಿಪತಿ ನೀನೆ | ಮುದ್ದು ಪಾರ್ವತಿ ಸುತನೆ |
ಸದ್ಬುದ್ಧಿ ಸೌಭಾಗ್ಯ | ವರವ ಬೇಡುವೆನಯ್ಯ ||೪||

Digital: Sudha Prasanna        Vocal: Chandrakala Bhaskara

Download:      Download PDF file      Download MP3 audio file

Maganannu Harasiddu:Baala Nee Gunasheela….

|| ಮಗನನ್ನು ಹರಸಿದ್ದು ||

ಬಾಲ ನೀ ಗುಣಶೀಲನಾಗಿಳೆಯೊಳಗೆ ಬಾಳೆಲೊ ಅನುದಿನ || ಇಳೆಯೊಳಗೆ ಬಾಳೆಲೊ ಅನುದಿನ ||ಪ||
ಕಾಲ ಕಾಲಕೆ ಬಿಡದೆ ಹರುಷದಿ | ಭಜಿಸುತಿರು ಶ್ರೀ ಲೋಲನ ||ಅ.ಪ||

ಪಂಥ ಪಗಡೆ ಜೂಜಿನಾಟಕೆ | ಚಿತ್ತವನು ನೀ ಕೊಡದಿರು |
ಸತ್ಯವಂತರ ಸಂಗದಿಂದಲಿ | ನಿತ್ಯ ಸುಖವನು ಭೋಗಿಸು ||೧||

ಕಾಮ ಕ್ರೋಧ ಲೋಭ ಮೋಹ ಎಂಬ | ರಿಪುಗಳ ಗೆಲಿದ್ವರ |
ಪ್ರೇಮದಿಂದಲಿ ಪೊರೆವ ಸತತ | ಶ್ಯಾಮಸುಂದರ ಸರ್ವದ ||೨||

ಶುಧ್ಧ ಭಾವದಿಂದದ್ವೈತ ಮತ | ಸಿದ್ಧಾಂತ ಪದ್ಧತಿಯಲ್ಲಿರು |
ಬುದ್ಧಿ ಮಾತುಗಳರಿತು ಜಗದೊಳು | ವಿದ್ಯಾವಂತನಾಗಿರು ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Dampatige Aarati: Eseva Manika Ratna….

|| ದಂಪತಿಗೆ ಆರತಿ ||

ಎಸೆವ ಮಾಣಿಕ ರತ್ನ | ಹಸೆಯ ಪೀಠದ ಮೇಲೆ | ಶಶಿರವಿ ಪ್ರಭೆಯಂದದಿ |
ಕೇಶವ ಸಿರಿ ಎಸೆದು ಕುಳ್ಳಿರಲಂದದಿ | ಸತಿಯವರು ಮುದದಿ | ಕುಸುರಿ ಕಂಕಣ ಕರದಿ ಹೊಳೆಯುತ |
ನೊಸಲಿಗಕ್ಷತೆಯಿಟ್ಟು ಹರುಷದಿ | ಅಸುರಸಂಹಾರಕಗು ಲಕ್ಷುಮಿಗು |
ಕುಸುಮಗಂಧಿನಿಯವರು ಪೊಗಳುತ | ಕುಶಲದಾರತಿಯ ಬೆಳಗಿದ ||೧||

ಬಿಂಬಧರೆಯರು ಬಾಲೆಯರು ಬೆಡಗಿನಲಿ | ತುಂಬು ಯೌವನದವರು |
ಕೇಶವ ಸಿರಿ ಕಂಬು ಕಂದರ ಕಾಂತೆಯರು | ಕನಕಾಂಗಿಯವರು |
ಮಂದಹಾಸದಿ ಮೆಲ್ಲಡಿಯವರು | ಇಂದ್ರ ಮಾಣಿಕದ ಹರಿವಾಣದಿ |
ಚಂದ್ರಕಾಂತದ ಸೊಡರ ಬೆಳಕೆ | ಇಂದಿರೇಶ ಶ್ರೀ ಹರಿಗೂ ಲಕ್ಷುಮಿಗೂ |
ಕುಂದಣದಾರತಿಯ ಬೆಳಗಿದ ||೨||

ಶ್ವೇತಾಶ್ವರೂಢಗೆ | ಸುಜನರೋದ್ಧಾರಗೆ | ನಿತ್ಯ ನಿರ್ಮಲಾಕಾರಗೆ |
ಸದಾನಂದ ಭಕ್ತರ ಪಾಲಿಪಗೆ | ಲಕ್ಷ್ಮಿವಲ್ಲಭಗೆ |
ಕರ್ತೃಕೇಶವ ಲಕ್ಷ್ಮಿಯರಸಗೆ | ಮುತ್ತು ಮಾಣಿಕದ ಹರಿವಾಣದಿ |
ಚಿತ್ತ ಶುದ್ಧಿಯೊಳೆಲ್ಲ ಸತಿಯರು | ಎತ್ತಿ ಕರದಲಿ ತಳೆದು ಶೇಷೆಯ |
ಅಕ್ಷಯದಾರತಿಯ ಬೆಳಗಿದ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Aarati: Mangala Paadire….

|| ಆರತಿ ||

ಮಂಗಲ ಪಾಡಿರೆ ರಂಗಗೀಗ ||ಪ|| ಅಂಗನೆಯರು ಶೄಂಗಾರದಿ ಬೇಗ ||ಅ.ಪ||

ಗೋಪಿಯ ಕಂದ | ಗೋಕುಲಾನಂದ | ತಾ ಕೊಳಲೂದುತ ನಲಿವ ಶ್ರೀಹರಿಗೆ ||೧||

ವಸುದೇವ ಕಂದ | ವಸುಧೆಗಾನಂದ | ಶಶಿಮುಖಿಯರ ಮನೆಯ ಮೊಸರ ಕದ್ದವಗೆ ||೨||

ಉದುಕ ಶಯನ | ಪದುಮ ನಯನ | ಮುದದಿಂದ ಮಾವನ ಕೆಡಹಿ ಬಂದವಗೆ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Arati:Maadire Mangalavaa….

|| ಆರತಿ ||

ಮಾಡಿರೆ ಮಂಗಲವ | ಸಖಿಯರೆ | ಪಾಡಿರೆ ಸಂಗೀತವ ||ಪ||
ಮಾರನ ತಾತಗೆ ವಾರಿಜಾಂಬಿಕೆಯರು ||ಅ.ಪ||

ಉಕ್ಷಿಲಿ ಜಗವ | ರಕ್ಷಿಸಿ ಮೆರೆವ |
ಅಕ್ಷಯಾತ್ಮಕ ಮಹಲಕ್ಷ್ಮಿಯ ರಮಣಗೆ ||೧||

ಮಂದಾರವೆತ್ತಿದ | ಒಂದೇ ಬೆರಳಲಿ |
ಸಿಂಧು ಶಯನ ಮುದ್ದು ಇಂದಿರೆರಮಣಗೆ ||೨||

ಸಂಗೀತಗಾನಲೋಲ | ಶೄಂಗಾರಶೀಲ |
ಗಂಗಾಜನಕ ಭುಜಂಗ ಶಯನನಿಗೆ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Enne Hanisiddu: Satya Shree Ganapatiya….

|| ಎಣ್ಣೆ ಹನಿಸಿದ್ದು ||

ಸತ್ಯ ಶ್ರೀ ಗಣಪತಿಯ ಭಕ್ತಿಯಲಿ ಬಲಗೊಂಡು | ಎತ್ತಿ ಕರಗಳನೆ ಮುಗಿವೆನು |
ಮುಗಿವೆನು ಶ್ರೀಹರಿಯ ಒತ್ತೆಣ್ಣೆ ಪದ ನಾ ಪೊಗಳುವೆ ||ಪ||

ಚಪ್ಪರದೊಳಗೆಲ್ಲಾ ಬಟ್ಟುಮುತ್ತಿನ ಹಸೆ ಬರೆದು | ಪಟ್ಟೆವಾಳೆಯನೆ ಹಸೆ ಹಾಸಿ |
ಹಸೆ ಹಾಸಿ ಸಖಿಯರು ಉಲ್ಲಾಸದೊಳೊತ್ತಿದರೆ ಉಗುರೆಣ್ಣೆ ||೧||

ಚಾವಡಿಯೊಳಗೆಲ್ಲಾ ಸಣ್ಣ ಮುತ್ತಿನ ಹಸೆ ಬರೆದು | ಬಣ್ಣವಾಳೆಯನೆ ಹಸೆ ಹಾಸಿ |
ಹಸೆ ಹಾಸಿ ಸಖಿಯರು ಚಂದದೊಳೊತ್ತಿದರೆ ಉಗುರೆಣ್ಣೆ ||೨||

ಒತ್ತೆಣ್ಣೆಯ ಒತ್ತುವೆ ಅತ್ತಿಗೆ ರುಗುವಿಣಿ ಬಾರೆ | ಮತ್ತೆ ಅಣ್ಣಯ್ಯನ ಕೆಲದಲ್ಲಿ |
ಕೆಲದಲ್ಲಿ ಎನುತಾಲೆ ಚಕ್ಕಂದವನಾಡಿ ನುಡಿದಾಳೆ ||೩||

ಮಲ್ಲಿಗೆಯ ತೈಲವ ನಲ್ಲೆಯರೆ ಹದಮಾಡಿ | ಚೆಲ್ವ ಶ್ರೀಹರಿಯ ಮಹಿಮೆಯ |
ಮಹಿಮೆಯ ಪೊಗಳುತ್ತ ಉಲ್ಲಾಸದೊಳೊತ್ತಿದರೆ ಉಗುರೆಣ್ಣೆ ||೪||

ಸಂಪಿಗೆಯ ತೈಲವ ಕೆಂಚೆಯರೆ ಹದಮಾಡಿ | ಪಂಕಜನಾಭನಿಗೆ ಶರಣೆಂದು |
ಶರಣೆಂದು ಪಾಡುತ್ತ ಬಿಂಕದಲೊತ್ತಿದರೆ ಉಗುರೆಣ್ಣೆ ||೫||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file