Monthly Archives: May 2014

Alamkarisiddu:Nitya Nirmalanige ….

|| ಅಲಂಕರಿಸಿದ್ದು ||

ನಿತ್ಯನಿರ್ಮಲನಿಗೆ ನೀರೆರೆದು ತಾನು ಎತ್ತಿ ತೊಡೆಯೊಳಿಟ್ಟು ಮುದ್ದಾಡಿ |
ಎತ್ತಿ ತೊಡೆಯೊಳಿಟ್ಟು ಮುದ್ದಾಡಿ || ಮುತ್ತ ಕೊಟ್ಟು ಬಹು ವಿಧದಿಂದ ಮುದ್ದಿಸಿ |
ಅರ್ತಿಯಿಂದಲೆ ಅಲಂಕರಿಸಿದಳು | ಅರ್ತಿಯಿಂದಲೆ ಅಲಂಕರಿಸಿದಳು||೧||

ಕಡು ಮುದ್ದು ಕೄಷ್ಣನ ತೊಡೆಯ ಮೇಲೆತ್ತುತ್ತ | ಜಡೆಯ ಹೆಣೆದು ಹೂವ ಮುಡಿಸಿ ಬೇಗ ||
ಬಿಡದೆ ಮುತ್ತಿನ ಚಂಡರಳೆಲೆ ಗಂಟನು ಸಡಗರದಲೆ ಅಲಂಕರಿಸಿದಳು ||೨||

ಎನ್ನಪ್ಪ ರಂಗ ನೀ ಸುಮ್ಮನಿರು | ದೊಡ್ಡ ಗುಮ್ಮ ಬಂದನು ಅಳಬೇಡೇನುತ ||
ಮನ್ಮಥ ಪಿತನಿಗೆ ಬೆಣ್ಣೆಯ ತಿನಿಸುತ್ತ | ಸನ್ಮನದಿಂದಲಂಕರಿಸಿದಳು ||೩||

ಕಾಲಲಂದಿಗೆ ಗಜ್ಜೆ ತೋಳ ಮಣಿಯ ದಂಡೆ | ಬಾಲನ ಹರಳೋಲೆಗಳು ನಲಿಯೆ ||
ನೀಲದುಡುಗೆಯುಟ್ಟ ಬಾಲ ನೀ ಬಾರೆಂದು | ಪಾಲುಣಿಸುವ ಪುಣ್ಯ ಪಡೆದಳಮ್ಮ ||೪||

ಪೊಡವಿಯ ಈರಡಿ ಮಾಡಿದ ದೇವ | ತುದಿಬೆರಳಲಿ ಕೊಡೆಗಳ ಹಿಡಿದು | ತಾ ||
ಅಡಿ ಇಡು ಮಗನೆ | ಮೇಲಡಿ ಇಡು ಎನುತಾಲೆ ನಡೆಗಲಿಸುವ ಪುಣ್ಯ ಪಡೆದಳಮ್ಮ| ತಾ ||೫||

ಶಂಖ ಚಕ್ರ ಗದ ಪದುಮ ಧಾರಕನ | ಪಂಕಜ ಶತಕೋಟಿ ತೇಜನನ ||
ಶಂಕೆಯಿಲ್ಲದೆ ಆಭರಣಗಳಿಡುತಲಿ | ಅಲಂಕರಿಸುವ ಪುಣ್ಯ ಪಡೆದಳಮ್ಮ ||೬||

ಸಾಗರ ಶಯನನೆ ಭೋಗಿಶಾನನ ಮೇಲೆ | ಯೋಗನಿದ್ರೆಯೊಳಿಪ್ಪ ದೇವ ನಮೋ ||
ಆಗಮ ನಿಗಮಗಳರಸಿ ಕಾಣದ ವಸ್ತು | ಪಾಡಿ ತೂಗುವ ಪುಣ್ಯ ಪಡೆದಳಮ್ಮ ||೭||

ಮಾಧವ ಬಾ | ಮಧುಸೂದನ ಬಾ ಬಾ | ಆದಿಮೂರುತಿ ಹರಿ ಬಾ ಎನುತ ||
ವೇದಮೂರುತಿ ಶ್ರೀ ಪುರಂದರ ವಿಠಲನ | ಆದರಿಸಿಯೆ ಅಲಂಕರಿಸಿದಳು ||೮||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Mangala Snaana:Indu Bandakkavvange….

|| ಮಂಗಳ ಸ್ನಾನ ||

ಇಂದು ಬಂದಕ್ಕವ್ವಂಗೆ ಚೆಂಬಿನಲ್ಲುದಕವ ನೀಡಿ | ದಂಡೆ ತಂಡುಲವ ಮುಡಕೊಡಿ |
ಮುಡಕೊಡಿ ಅಕ್ಕವ್ವಂಗೆ | ತಂದು ಕೊಡಿ ಹೊನ್ನ ಕಲಶವ ||೧||

ಈಗ ಬಂದ ತಂಗವ್ವಂಗೆ ಹೂಜಿಯಲ್ಲುದಕವ ಕೊಡಿ | ಹೂವು ದಂಡೆಗಳ ಮುಡಕೊಡಿ |
ಮುಡಕೊಡಿ ತಂಗವ್ವಂಗೆ | ತಂದು ಕೊಡಿ ಹೊನ್ನ ಕಲಶವ ||೨||

ಅಕ್ಕ ಕಲಶವ ಕೊಂಡು ಹೊಸ್ತಿಲಿನಿಂದಿಳಿವಾಗ | ಹೊಸ್ತಿಲಿನ ಗೌಳಿ ನುಡಿದಾಳೆ |
ನುಡಿದಾಳೆ ತನಗೊಬ್ಬ ಪುತ್ರ ಹುಟ್ಟಿದನೆ ಬಳಗಕ್ಕೆ ||೩||

ತಾಯಿ ಕಲಶವ ಕೊಂಡು | ಬಾಗಿಲನೆ ಇಳಿವಾಗ | ಬಾಗಿಲಿನ ಗೌಳಿ ನುಡಿದಾಳೆ |
ನುಡಿದಾಳೆ  ತನಗೊಬ್ಬ ಬಾಲ ಹುಟ್ಟಿದನೆ ಬಳಗಕ್ಕೆ ||೪||

ಅಂದದಲಿ ಚಂದದಲಿ | ಮೂರಂದದಲಿ ಒಲೆ ಹೂಡಿ | ಗಂಧದ ಚಕ್ಕೆ ತಳಕ್ಕಿಟ್ಟು |
ತಳಕ್ಕಿಟ್ಟು ಕಾದ ನೀರು | ನಾರಿ ನಿನ್ನ ಮಗನ ಜಳಕಕ್ಕೆ ||೫||

ಆಯದಲಿ ಛಾಯದಲಿ | ಮೂರಾಯದಲಿ ಒಲೆ ಹೂಡಿ | ಆಲದ ಚಕ್ಕೆ ತಳಕ್ಕಿಟ್ಟು |
ತಳಕ್ಕಿಟ್ಟು ಕಾದ ನೀರು | ಮಿತ್ರೆ ನಿನ್ನ ಮಗನ ಜಳಕಕ್ಕೆ ||೬||

ಅತ್ತಿಯ ಮಣೆಗೆ ಹೇಳಿ | ಹತ್ತೆಂಟು ದಿನವಾತು | ಅತ್ತಿ ಮಣೆ ಯಾಕೆ ತರಲಿಲ್ಲೆ |
ತರಲಿಲ್ಲೆ ನಮ್ಮ ಮನೆಯ | ಮುತ್ತಿನ ಹಸೆ ಮಣೆಯ ತೆಗತನ್ನಿ ||೭||

ಆಲದ ಮಣೆಗೆ ಹೇಳಿ ಆರೇಳು ದಿನವಾತು | ಆಲದ ಮಣೆ ಯಾಕೆ ತರಲಿಲ್ಲೆ |
ತರಲಿಲ್ಲೆ ನಮ್ಮ ಮನೆಯ | ಹೂವಿನ ಹೊಸ ಮಣೆಯ ತೆಗ ತನ್ನಿ ||೮||

ಪುತ್ರ ಮಿಂದ ನೀರು ಹೊಸ್ತಿಲಿಗೆ ಹರಿದಾವೆ | ಹೊಸ್ತಲ ದಾಟಿ ಮಿಗಿಲ್ದಾಟಿ |
ಮಿಗಿಲ್ದಾಟಿ ಮುಂದಿನ ಕಿತ್ತಿಳೆ ವನಕೆ ಹರಿದಾವೆ ||೯||

ಬಾಲ ಮಿಂದ ನೀರು ಬಾಗಿಲಿಗೆ ಹರಿದಾವೆ | ಬಾಗಿಲ ದಾಟಿ ಮಿಗಿಲ್ದಾಟಿ |
ಮಿಗಿಲ್ದಾಟಿ ಮುಂದಿನ ಬಾಳೆಯ ವನಕೆ ಹರಿದಾವೆ ||೧೦||

ಪುತ್ರ ಮಿಂದು ಬಂದು | ಹೊಸ್ತಿಲೊಳಗಿರುವನು | ಬಪ್ಪವರ ದೄಷ್ಟಿ ಘನವಲ್ಲ |
ಘನವಲ್ಲ ತಾಯಮ್ಮ | ಪುತ್ರಯ್ಯನ ಒಳಗೆ ಕರೆತಾರೆ ||೧೧||

ಬಾಲ ಮಿಂದು ಬಂದು ಬಾಗಿಲೊಳಗಿರುವನು | ಬರುವವರ ದೄಷ್ಟಿ ಘನವಲ್ಲ |
ಘನವಲ್ಲ ತಾಯಮ್ಮ | ಬಾಲಯ್ಯನ ಒಳಗೆ ಕರೆತಾರೆ ||೧೨||

ಗುಡುಗು ಮಳೆ ಎಂದು ಹೆದರದಿರು ಹೆತ್ತಮ್ಮ | ಗುಡುಗಲ್ಲ ಮಳೆಯ ಹನಿಯಲ್ಲ |
ಹನಿಯಲ್ಲ ನಿನ್ನ ಕುವರ | ಮಿಂದು ಚಂಡಿಕೆಯ ಕುಡುಗಿದ ||೧೩||

ಮಿಂಚು ಮಳೆ ಎಂದು ಅಂಜದಿರು ತಾಯಮ್ಮ | ಮಿಂಚಲ್ಲ ಮಳೆಯ ಹನಿಯಲ್ಲ |
ಹನಿಯಲ್ಲ ನಿನ್ನ ಕುವರ | ಮಿಂದು ಚಂಡಿಕೆಯ ಕುಡುಗಿದ ||೧೪||

ಎಸರ್ಯೋಳದಂಗಲೆ ಎಸರೇತಕ್ಕೆದ್ದಾವೆ | ಎಸರಿಗೆ ದೊಡ್ಡವರ ಮಗ ಮಿಂದು |
ಮಗ ಮಿಂದು ಬರುವಾಗ | ಎಸರಿನ ಹೆಗ್ಗಾಳೆ ನುಡಿದಾವೆ ||೧೫||

ನೀರ್ಯೋಳದಂಗವೆ ನೀರ್ಯಾತಕ್ಕೆದ್ದಾವೆ | ಊರಿಗೆ ದೊಡ್ಡವರ ಮಗ ಮಿಂದು |
ಮಗ ಮಿಂದು ಬರುವಾಗ | ಭೇರಿ ವಾದ್ಯಗಳೆ ಮೊಳಗಿದ ||೧೬||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Naandi Maadiddu:Naandi Punyaahavanu….

|| ನಾಂದಿ ಮಾಡಿದ್ದು ||

ನಾಂದಿ ಪುಣ್ಯಾಹವನು | ಮಾಡಿಸಿದನು | ಸೌಂದರ್ಯದಿ ಗಾರ್ಘ್ಯನು ||ಪ||
ಮಿಂದು ಮಡಿಯನುಟ್ಟು ಬಂದ ಯಜಮಾನಗೆ | ಚಂದದಿ ಗೈದು ಕರ್ಮಾಂಗವಾಗಿರುವಂಥ ||ಅ.ಪ||

ಮಂಡಲ ಹಾಕುತಾಗ | ಸಡಗರದೊಳು ತಂಡುಲವಿರಿಸಿ ಬೇಗ ||
ಸೊಂಡಿಲಾನನನನು ಕಲಶದಿ ಪೂಜಿಸುತಾಗ | ಅಂಡಜ ವಾಹನಗೆರಗಿ ಭಕ್ತಿಯೊಳೀಗ ||೧||

ಜ್ಯೋತಿಯ ಪಲ್ಲವವ | ಅಪರಂಜಿಯ ಪಾತ್ರೆಯೊಳಿರಿಸಿ ಬೇಗ ||
ಸಾತಿಶಯದಿ ತ್ರೈವೇಣಿಯ ಜಲ ತುಂಬಿ | ನೂತನದಲಿ ನಾರಿಕೇಳವ ಮೇಲಿಟ್ಟು ||೨||

ಕಲಶಯುಗ್ಮವನು ಆಗ | ಮಂಡಲದೊಳಿಟ್ಟು ಗಳಿಲನೆ ಪಂಚರತ್ನವ ||
ನಲವಿಂದಿಕ್ಕುತ ಮಕರ ಧ್ವಜನ ಆವಾಹಿಸಿ | ಆಲಸದೆ ಪೂಜಿಸಿ ವೀಳ್ಯಾರತಿ ಗೈದು ||೩||

ಒಂದು ಕಲಶದ ಜಲವ | ಮತ್ತೊಂದಕಾನಂದದಿ ಮಿಶ್ರಿತವ ||
ಚಂದದಿ ಗೈದು ಪ್ರಧಾನ ಕಲಶವನೆತ್ತಿ | ಗೋವಿಂದನ ಸ್ಮರಿಸಿ ಪ್ರದಕ್ಷಿಣೆ ಮೂರಿಕ್ಕಿ ||೪||

ಚಂದದಿ ಜಲವನಿಟ್ಟ | ಪಾತ್ರೆಯೊಳಿಕ್ಕಿ ಮಂದಹಾಸದೊಳು ವಿಪ್ರ ||
ಕೊಂಡು ದೂರ್ವಾಂಕುರ ನಂದದಿ ಪ್ರೋಕ್ಷಿಪ | ನಂದದಾಯಕ ಆತ್ಮಾರಾಮನ ಮಂತ್ರದೊಳ್ ||೫||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Yajneshwarana Huttu:Guruhiriyara Paada….

|| ಯಜ್ಞೇಶ್ವರನ ಹುಟ್ಟು ||

ಗುರುಹಿರಿಯರ ಪಾದ ಪದ್ಮಕಭಿವಂದಿಸಿ | ಸ್ಮರಹರ ಪಿತಗೆ ನಮೋ ಎಂದು |
ನಮೋ ಎಂದ್ ಯಜ್ಞೇಶ್ವರರ | ಚರಿತೆಯನೆ ಪಾಡಿ ಪೊಗಳೂವಿ ||ಪ||

ಸೄಷ್ಟಿ ನಿರ್ಮಿಸಿ ಬ್ರಹ್ಮ ಚಿತ್ತದೊಳಾಲೋಚಿಸಿ | ಸಪ್ತ ಋಷಿಗಳನೆ ಬೆಸಗೊಂಡು |
ಬೆಸಗೊಂಡು ಯಜ್ಞೇಶ್ವರರ ಹುಟ್ಟಿಸಬೇಕೆಂದೆ ನುಡಿದಾನೆ ||೧||

ದೇವಾದಿಸುರರು ತಮ್ಮಾಹಾರಕ್ಕೋಸ್ಕರ | ಪಾವಕನ ನಮಗೆ ದಯಮಾಡಿ |
ದಯಮಾಡಿ ಕೊಡಿರೆಂದು | ದೇವಾದಿ ಸುರರು ನುಡಿದಾರೆ ||೨||

ಗಂಗೆ ಪಾರ್ವತಿ ಸಹ ನಂದಿ ವಾಹನವೇರಿ | ಬಂದಾರೆ ಸುರರ ಬಳಿಯಲ್ಲಿ |
ಬಳಿಯಲ್ಲಿ ಈಶ್ವರರು | ಇಂದ್ರ ಮಾಡುಗ್ರ ತಪವನ್ನು ||೩||

ನಮ್ಮ ಲೋಕದ ಜನರು ಹಣ್ಣು ಹಂಪಲ ಸವಿದು | ಪನ್ನೀರಾಹಾರ ದೊಳಗಿರ್ಪ |
ಒಳಗಿರ್ಪದೆಂಬುವದ | ಪನ್ನಗಭೂಷಣನು ತಿಳಿದಾನೆ ||೪||

ಉರಗಭೂಷಣ ತಾನು ಅರಿಯದೆ ಎಂತೆಂಬ | ಧರೆಯ ಮಾನವರ ಅತಿ ಪಾಪ |
ಅತಿಪಾಪದ ಹೊರೆಗಳ | ಹೊರಲಾರೆ ಎಂದೇ ನುಡಿದಾನೆ ||೫||

ಕಡಲೇಳು ಸಾಗರದ ನಡು | ಮಧ್ಯದೊಳಗಿರುವ ಪೊಡವಿಪಾಲನೆಂಬ ಪುರುಷನ |
ಪುರುಷನ ಮೆಚ್ಚಿಸುವುದಕೆ | ಕಡು ಉಗ್ರ ತಪವಾಚರಿಸಿದ ||೬||

ನೀನಲ್ಲದೆ ಜಗವನು ಸಲಹುವರ್ಯಾರೆಂದು | ತಂದೆ ತಾಯಿಗಳು ಜಗಕೆಲ್ಲ |
ಜಗವ ಮೂರ್ಲೋಕವನು | ರಕ್ಷಿಸಬೇಕೆಂದೇ ನುಡಿದಾರೆ ||೭||

ಕರೆತಂದು ಕಮಲ ಪೀಠದ ಮೇಲೆ ಕುಳ್ಳಿರಿಸಿ | ಒಂದಾಗಿ ಸುರರು ನಮಿಸುತ್ತ |
ನಮಿಸುತ್ತ ಪೊಡವಿಪಾಲಗೆ | ಪಟ್ಟ ಕಟ್ಟಿದರೆ ಸುರರೆಲ್ಲ ||೮||

ಸುರರಾಡಿದ ಮಾತಿಗೆ ಹರ ನಸುನಗುತಲಿ | ಶಿರನಗಲಿ ಬಿಟ್ಟ ಅನಲನ |
ಅನಲ ಮೂರ್ಲೋಕವನು | ಸುಡುವಂದದಲಿಳಿದ ಧರಣಿಗೆ| |೯||

ಗುಡುಗುಡು ಗುಟ್ಟುತ್ತ ಗಗನ ಅಲ್ಲಾಡುತ್ತ | ಶಿರನಗಲಿ ಬಿಟ್ಟ ಅನಲನ |
ಅನಲ ಮೂರ್ಲೋಕವನು | ಸುಡುವಂದದಲಿಳಿದ ಧರಣಿಗೆ ||೧೦||

ಗಗನದ ತಾರೆಗಳು | ಉದುರುದುರುವಂದದಲಿ ಬಿಡಿ ಮುತ್ತು ಸುರಿದ ತೆರನಂತೆ |
ತೆರನಂತೆ ಪೊಡವಿಪಾಲನು | ಕಡುಬೇಗದಲಿಳಿದ ಧರಣಿಗೆ ||೧೧||

ಕರೆತಂದು ಕಮಲ ಪೀಠದ ಮೇಲೆ ಕುಳ್ಳಿರಿಸಿ | ಒಂದಾಗಿ ಸುರರು ನಮಿಸುತ್ತ |
ನಮಿಸುತ್ತ ಪೊಡವಿಪಾಲಗೆ | ಕರ್ಪೂರದಾರತಿಯ ಬೆಳಗಿದ ||೧೨||

ಕೊಡಕೊಡದಲಿ ಘೄತ ತಿಲದುಂಡೆ ರಾಶಿಗಳು | ಬರಹದ ಶಾಲು ರಚನೆಯ |
ರಚನೆ ಪೀತಾಂಬರದ | ಪಾವಕಗಾಹುತಿಯ ಎರೆದಾರೆ ||೧೩||

ದರ್ಭೆ ಸಮಿಧವು | ಯಜ್ಞೋಪವೀತಗಳು | ಧನ ಧಾನ್ಯ ಸಹಿತ ನವವಿಧ |
ನವವಿಧ ಮಂತ್ರಗಳಿಂದ | ಯಜ್ಞೇಶ್ವರಗಾಹುತಿಯ ಎರೆದಾರೆ ||೧೪||

ಹಂಡೆ ಕರೆದ ಹಾಲು | ಹಲವು ಪರಿ ಭಕ್ಷಗಳು | ಧನ ಧಾನ್ಯ ಸಹಿತ ನವವಿಧ |
ನವವಿಧ ಮಂತ್ರಗಳಿಂದ | ಪಾವಕಗಾಹುತಿಯ ಎರೆದಾರೆ ||೧೫||

ಇಂತು ಪೊಡವಿಪಾಲನ ಅಂತರಂಗದ ಕಥೆಯ | ಸಂತೋಷದಿಂದ ಒರಿವೆನು |
ಒರಿವೆನು ತಪ್ಪಿದ್ದರೆ ವೆಂಕಟರಮಣ ಕರುಣಿಸು ||೧೬||

ಜಯ ಜಯ ಪೊಡವಿಪಾಲನಿಗೆ | ಜಯ ಕಾಲನ ಸನ್ನಿಧಿಗೆ | ಜಯಜಯ ಪಾವಕಗೆ ಎನುತಾಲೆ |
ಎನುತಾಲೆ ಭಕ್ತರು ಜಯವೆಂದಾರತಿಯ ಬೆಳಗಿದ ||೧೭||

ಮಂಗಳ ಪೊಡವಿಪಾಲನಿಗೆ |  ಮಂಗಳ ಕಾಲನ ಸನ್ನಿಧಿಗೆ | ಮಂಗಳ ಪಾವಕಗೆ ಎನುತಾಲೆ |
ಎನುತಾಲೆ ಬ್ರಾಹ್ಮಣರು | ಜಯಮಂಗಳಾರತಿಯ ಬೆಳಗಿದ ||೧೮||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file