Monthly Archives: June 2014

Aasheervaada:Hattu Saaviravaagu….

|| ಆಶೀರ್ವಾದ ||

ಹತ್ತು ಸಾವಿರವಾಗು | ಕಿತ್ತಳೆ ವನವಾಗು | ಬಪ್ಪವರಿಗೆ ತವರ ಮನೆಯಾಗು |
ಮನೆಯಾಗು ತಮ್ಮಯ್ಯ | ಹೆತ್ತವರ ಹೆಸರು ನಡೆಯಲಿ ||೧||

ಆರು ಸಾವಿರವಾಗು | ಬಾಳೆಯ ವನವಾಗು | ಬರುವವರಿಗೆ ತವರ ಮನೆಯಾಗು |
ಮನೆಯಾಗು ತಮ್ಮಯ್ಯ | ಹಿರಿಯವರ ಹೆಸರು ನಡೆಯಲಿ ||೨||

ಅಕ್ಕ ಆರತಿ ಎತ್ತಿ | ಮತ್ತೆ ನಾ ಹರಸಿದ | ಗೊತ್ತಿಯ ರಾಜ್ಯದರಸಾವು |
ಅರಸಾಗು ಬಡವರ | ರಕ್ಷಿಸುವ ಭಾಗ್ಯ ನಿನಗಾವು ||೩||

ತಾಯಿ ಆರತಿ ಎತ್ತಿ ಹೀಗೆ ತಾ ಹರಸಿದ | ಗೋವೆಯ ರಾಜ್ಯದರಸಾವು |
ಅರಸಾಗು ಬಡವರ | ರಕ್ಷಿಸಿ ನೀನು ಸುಖ ಬಾಳು ||೪||

ಸಂಪತ್ತು ಹೆಚ್ಚಲೆಂದು | ಸಂಪಿಗೆಯನಿಡಿಸಿದ | ತಂಪಿಗೆ ಎರೆದ ನೊರೆಹಾಲು |
ನೊರೆ ಹಾಲೆನ್ನಮ್ಮನ | ಸಂಪತ್ತಿನರಗಿಣಿಯೆ ಸುಖ ಬಾಳು ||೫||

ಬಳಗ ಹೆಚ್ಚಲೆಂದು | ಬದನೆಯ ನೆಡಿಸಿದ | ಧೇನುವಿಗೆರೆದ ನೊರೆಹಾಲು |
ನೊರೆಹಾಲೆನ್ನಮ್ಮನ ಬಳಗದರಗಿಣಿಯೆ ಸುಖಬಾಳು ||೬||

ಉಪ್ಪರಿಗೆ ಒಳವಿಗೆ ಕಿತ್ತಳೆ ಸಸಿ ಹುಟ್ಟಿ | ಗುತ್ತಿಗೆ ಬೇರು ಇಳಿದಂತೆ |
ಇಳಿದಂತೆ ತಮ್ಮಯ್ಯ | ಹಿರಿಯವರ ಹೆಸರು ನಡೆಯಲಿ ||೭||

ಮಾಳಿಗೆ ಒಳವಿಗೆ ಬಾಳೆಯ ಸಸಿ ಹುಟ್ಟಿ | ಗೋವಿಗೆ ಬೇರು ಇಳಿದಂತೆ |
ಇಳಿದಂತೆ ತಮ್ಮಯ್ಯ | ಹೆತ್ತವರ ಹೆಸರು ನಡೆಯಲಿ ||೮||

ಅಡ್ಡಮುಡಿ ತಂಗವ್ವ | ಬಗ್ಗಿದಳೆ ಚರಣಕ್ಕೆ | ಚಿತ್ತದ್ವಲ್ಲಭನ ಅಗಲದೆ |
ಅಗಲದೆ ಇರು ಎಂದು ಹೆತ್ತಮ್ಮ ಸಾವಿರವ ಹರಸಿದ ||೯||

ಸಣ್ಣಮುಡಿ ತಂಗವ್ವ | ಬಾಗಿದಳೆ ಚರಣಕ್ಕೆ | ಪ್ರಾಣದ್ವಲ್ಲಭನ ಅಗಲದೆ |
ಅಗಲದೆ ಇರು ಎಂದು | ತಾಯಮ್ಮ ಸಾವಿರವ ಹರಸಿದ ||೧೦||

ಬೆಟ್ಟದ ಗರಿಕೆಯ ಮೆಟ್ಟುವರೊ ತುಳಿವರೊ | ಮತ್ತೊಂದು ಮಳೆಗೆ ಚಿಗುರುವುದು |
ಚಿಗುರುವುದೊ ಬೆಟ್ಟದ ಗರಿಕೆಯಂದದಲಿ ಸುಖಬಾಳು ||೧೧||

ಏರಿಯ ಗರಿಕೆಯ ತುಳಿವರು ಮೆಟ್ಟುವರು | ಇನ್ನೊಂದು ಮಳೆಗೆ ಚಿಗುರುವುದು |
ಚಿಗುರುವುದೊ ಏರಿಯ ಗರಿಕೆಯಂದದಲಿ ಸುಖಬಾಳು| |೧೨||

ಸೂರ್ಯಮರಂಥ ಮಗನೆ | ಸೂರ್ಯಮರಿಗೆ ಶರಣೆನ್ನು |
ಸೂರ್ಯಮರಿಗೆ ನೀನು ಶರಣೆನ್ನು | ಶರಣೆನ್ನು ಮೇಲಣ |
ಸೂರ್ಯಮರಿರುವತನಕ ಸುಖಬಾಳು ||೧೩||

ಚಂದ್ರಮನಂಥ ಮಗನೆ | ಚಂದ್ರಮರಿಗೆ ಶರಣೆನ್ನು |
ಚಂದ್ರಮರಿಗೆ ನೀನು ಶರಣೆನ್ನು | ಶರಣೆನ್ನು ಮೇಲಣ |
ಚಂದ್ರಮರಿರುವತನಕ  ಸುಖಬಾಳು ||೧೪||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Maganige Aasheervaada:Sukhiyaagi Baalelo….

|| ಮಗನಿಗೆ ಆಶೀರ್ವಾದ ||

ಸುಖಿಯಾಗಿ ಬಾಳೆಲೊ ನೀ | ಸುತನೇ ಸಂತಸದಿ ||ಪ||
ಸಕಲ ವಿದ್ಯವನೋದುತೆ ಲಕುಮಿ ಪತಿ ದಯದಿ |
ಅಖಿಲ ಲೋಕವ ಪಾಲಿಸಿ ಸರ್ವರ ಸಖ ನೀನೆಂದೆನಿಸಿ ||೧||

ಭೂಸುರರಾಶೀರ್ವಾದದೊಳು | ತೋಷವಗೊಳ್ಳುತಲಿ |
ವಾಸಿಸು ಗುರುಕುಲದೊಳಭ್ಯಾಸವ ಗೈಯುತಲಿ |
ಬೇಸರಿಸದೆ ಸಕಲ ಶಾಸ್ತ್ರಗಳ ತಿಳಿಯುತಲಿ |
ವಾಸುಕಿ ಭೂಷ ಗಣೇಶನ ದಯದಿ ಸಂಪೂರ್ಣ ಸಿದ್ಧಿಯ ಪೊಂದಿ ||೨||

ಕಾಲವನು ತಪ್ಪದೆ ನೀ ಧ್ಯಾನಿಕ ವಿಧಿಯಿಂದ |
ಪಾಲಿಸು ವರ್ಣಾಶ್ರಮದ ಧರ್ಮವನದನೊಂದ |
ಲಾಲಿಸು ಗುರು ಹಿರಿಯರ ನುಡಿ ಮೀರದಿರು ಕಂದ |
ನೀಲ ಮೇಘ ಶ್ಯಾಮ ಒಲುಮೆಯಿಂದಲಿ ನೀ ಬಾಳಯ್ಯಾ ಬಹು ಕಾಲ ||೩||

ವೇದದ ತತ್ವವ ಪರರಿಗೆ ಬೋಧಿಸುತಿರು ನೀನು |
ಆದಿ ಪುರಾಣದಲಿ ಗಳಿಸುತೆ ಕೀರ್ತಿಯನು |
ಛೇದಿಸು ದುರ್ಗುಣವನ್ನು ಅಹಂಕಾರಗಳನ್ನು |
ಸಾಧಿಸಿ ನಿಜಗುರು ದಯದಿಂದ ಚಿರಸುಖಿಯಾಗಿರು ಧರೆಯೊಳಿನ್ನು ||೪||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Udugore:Sannaganchina Shaalu….

|| ಉಡುಗೊರೆ ||

ಸಣ್ಣಗಂಚಿನ ಶಾಲು ವಲ್ಲಿಯು | ಚಿನ್ನದುಂಗುರ ಚುಳುಕಿ ಬಳೆಯು |
ಪೊನ್ನ ಕಂಕಣ ಹಸಿರು ಶಾಲೆಯ | ಚಿಣ್ಣರಿಗೆ ಬಾಲ್ದುಡುಗೆ ಬಂಗಾರವ |
ಬ್ರಹ್ಮನೊದಗಿಸಿದನೆ ರಾಜ ಸಭೆಯಲ್ಲಿ ||೧||

ಕಾಶಿ ಪಾವಡದಲ್ಲೆ ಬಿಗಿದಿದ್ದ | ಕೆತ್ತಿಸಿದ ನವರತ್ನದ್ವಲ್ಲಿಯು |
ಅಚ್ಚ ಬಿಳಿದು ಹಸಿರು ಶಾಲೆಯ ಪುತ್ರರಿಗೆ ಬಾಲ್ದುಡುಗೆ ಬಂಗಾರವ |
ವಸಿಷ್ಠರೊದಗಿಸಿದರೆ ರಾಜ ಸಭೆಯಲ್ಲಿ ||೨||

ಗುಂಡುಗೋಪುದ್ದಂಡಪಾಣಿಗೆ | ಪ್ರಚಂಡ ಭೈರವನಿತ್ತ ಸಭೆಯೊಳು |
ಅಚ್ಚ ಬಿಳಿದು ಹಸಿರು ಶಾಲೆಯ | ಚಿಣ್ಣರಿಗೆ ಬಾಲ್ದುಡುಗೆ ಬಂಗಾರವ |
ಬಂಧುಗಳೊದಗಿಸಿದರೆ ರಾಜ ಸಭೆಯಲ್ಲಿ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Kanchu Bhiksha:Maadhava Gopala Banda…

|| ಕಂಚು ಭಿಕ್ಷ ||

ಮಾಧವ ಗೋಪಾಲ ಬಂದ ನೋಡಿರಮ್ಮ |
ಅವನ ಪಾದದ ಗೆಜ್ಜೆ ಧನಿಯು ಚೆಂದವಮ್ಮ |
ಮಾಧವ ಗೋಪಾಲಗೆ ಭಿಕ್ಷವ ನೀಡಿರಮ್ಮ ||ಪ||

ಹಸ್ತದಲ್ಲೆ ರತ್ನದ ಕೊಳಲ ಪಿಡಿದನಮ್ಮ |
ಅವನ ಕುತ್ತಿಗೆಯೊಳಗಿನ ಮುತ್ತಿನ ಪದಕ ಚೆಂದವಮ್ಮ |
ಕಸ್ತೂರಿ ತಿಲಕವ ಹಣೆಯೊಳಗಿಟ್ಟನಮ್ಮ |
ಕೃಷ್ಣನ ದಿಟ್ಟಿಸಿ ನೋಡಿದರೆ | ದೃಷ್ಟಿ ತಾಗುವುದಮ್ಮ ||೧||

ಕರದೊಳಗೆ ದ್ರವ್ಯದ ಕೊಳಲ ಪಿಡಿದನಮ್ಮ |
ಅವನ ಸುಳಿಗುರುಳು ಕೋಮಲಾಂಗ ಚೆಂದವಮ್ಮ |
ಕೊಡವ ಒಡೆದು ಹಾಲು ಮೊಸರ ಸುರಿದನಮ್ಮ |
ವಾರಿಜನಾಭ ಶ್ರೀಕೃಷ್ಣನಮ್ಮ || ೨||

ವಾರಿಜನಾಭ ಮೇಳಗಳಿಂದ ಬರುವನಮ್ಮ |
ಸಖಿಯರ ಸೀರೆಯೆಲ್ಲ ಕದ್ದುಕೊಂಡು ಓಡಿದನಮ್ಮ |
ಓಡಿ ಕಡಹದ ಮರವನೇರಿ ನೋಡಿದನಮ್ಮ |
ವಾರಿಜನಾಭ ಶ್ರೀ ಕೃಷ್ಣನಮ್ಮ ||೩||

ಪಂಕಜನಾಭ ಬಿಂಕದಿ ಕೊಳಲ ಪಿಡಿದನಮ್ಮ |
ಅವನ ಕೊಂಕಿನ ಕೊಳಲು ಕೋಮಲಾಂಗ ಚೆಂದವಮ್ಮ |
ಶಂಕೆಯಿಲ್ಲದೆ ಅಸುರರ ಕುಲವ ಮಡುಹಿದನಮ್ಮ |
ಪಂಕಜನಾಭ ಶ್ರೀ ಕೃಷ್ಣನಮ್ಮ ||೪||

ಮಂತ್ರ ಜ್ಯೋತಿ ಆಗಿ ಮನೆಗೆ ಬರುವನಮ್ಮ |
ಅವಗೆ ಮಂತ್ರ ಯಂತ್ರ ತಂತ್ರಗಳು ಬಾರವಮ್ಮ |
ಮಂತ್ರ ಶಕ್ತಿ ರೂಪಿನಲ್ಲಿ ಇರುವನಮ್ಮ |
ಪಂಕಜನಾಭ ಶ್ರೀ ಕೃಷ್ಣನಮ್ಮ ||೫||

ಭಿಕ್ಷಾಂದೇಹಿ ಎಂದು ಬರುವನಮ್ಮ |
ಅವನ ಕೈಯೊಳಕ್ಷಯಪಾತ್ರ ಪಿಡಿದನಮ್ಮ |
ಜನನಿಯ ಚರಣಕ್ಕೆರಗಿ ನಿಂತನಮ್ಮ |
ತರಳಗ‍ಹರಳಿನ ಭಿಕ್ಷೆಯ ನೀಡಿರಮ್ಮ ||೬||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Bhasiga Mudisiddu:Dasharathanamdana Suta….

|| ಭಾಸಿಗ ಮುಡಿಸಿದ್ದು ||

ದಶರಥನಂದನ ಸುತ ರಾಮನಿಗೆ | ಹಸಮುತ್ತಿನ ಶೇಷೆಯನಿಡಿಸಿ |
ಮತಿವಂತನಾಗೆಂದು ಹರಸುತ್ತ ಕೌಸಲೆ | ಸುತನಿಗೆ ಭಾಸಿಗವ ಮುಡಿಸಿದ||೧||

ಜಯಜಯ ಜಯವೆನ್ನಿ ಸೀತಾರಾಮಗೆ | ಜಯ ಜಯ ಜಯವೆನ್ನಿ ಸೀತಾ ದೇವಿಗೆ |
ಜಯ ಜಯ ಜಯವೆಂದು ಹರಸುತ್ತ ಕೌಸಲೆ |  ಸುತನಿಗೆ ಭಾಸಿಗವ ಮುಡಿಸಿದ ||೨||

ಕಂಡಿರೊ ನೀವೆಲ್ಲ ವಂಡ್ಯ ಭಾಸಿಗವ | ಭಾಸಿಗಕೆಲ್ಲ ಸೂಸುಕ ಮುತ್ತೆ |
ಸೂಸುಕ ಮುತ್ತಿಗೆ ಗಿಳಿ ಹಿಂಡು ಪೌಂಸೆ | ವಿಸ್ತರವಾಗಿಹ  ನಲಿವಂಥ ಭಾಸಿಗವ |
ಪುತ್ರನ ನೊಸಲೊಳಗೆ ಮುಡಿಸಿದ ||೩||

ನೋಡಿರೆ ನೀವೆಲ್ಲ  ಜೋಳ್ಯ ಭಾಸಿಗವ | ಭಾಸಿಗಕೆಲ್ಲಾ ಸೂಸುಕ ಮುತ್ತೆ |
ಸೂಸುಕ ಮುತ್ತಿಗೆ ಗಿಳಿ ಹಿಂಡು ಪೌಂಸೆ | ವಿಸ್ತರವಾಗಿಹ  ನಲಿವಂಥ ಭಾಸಿಗವ |
ಸುತನ ನೊಸಲೊಳಗೆ ಮುಡಿಸಿದ ||೪||

*******

ಪುತ್ರ ಗೋಪಾಲನ ಕರೆದು ಕುಳ್ಳಿರಿಸಿ | ಮುತ್ತಿನಕ್ಷತೆಗಳ  ನೊಸಲೊಳಗಿರಿಸಿ |
ಪುತ್ರ ಗೋಪಲ ನೀ ಸೃಷ್ಟಿಯನಾಳೆಂದು | ಪುತ್ರಗೆ ಭಾಸಿಗವ ಮುಡಿಸಿದ ||೧||

ಬಾಲ ಗೋಪಾಲನ ಕರೆದು ಕುಳ್ಳಿರಿಸಿ | ಹೂವಿನಕ್ಷತೆಗಳ  ನೊಸಲೊಳಗಿರಿಸಿ |
ಬಾಲ ಗೋಪಾಲ ನೀ ಭೂಮಿಯನಾಳೆಂದು | ಬಾಲಗೆ ಭಾಸಿಗವ ಮುಡಿಸಿದ ||೨||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file